ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಅನಗತ್ಯವಾಗಿ ವಾಹನಗಳನ್ನು ರಸ್ತೆಗಿಳಿಸುವಂತಿಲ್ಲ ಎನ್ನಲಾಗಿದೆ. ಆದರೂ, ಅನಗತ್ಯವಾಗಿ ಕುಂದಾಪುರ ಪೇಟೆಗಿಳಿದವರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಟೇಶ್ವರ, ಕುಂಭಾಶಿ ಹಾಗೂ ಇತರೆಡೆಗಳಿಂದ ಸಕಾರಣವಿಲ್ಲದೆ ಪೇಟೆಗೆ ಬಂದವರ ಬೈಕ್, ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಕುಂದಾಪುರ ಡಿ.ವೈ.ಎಸ್ಪಿ ಶ್ರೀಕಾಂತ್, ಎಸ್.ಐ ಸುಬ್ಬಣ್ಣ, ಸದಾಶಿವ ಗವರೊಜಿ ನೇತ್ರತ್ವದಲ್ಲಿ ವಾಹನಗಳ ತಪಾಸಣೆ ನಡೆದಿದ್ದು, ಅನಗತ್ಯವಾಗಿ ಸಂಚಾರ ಮಾಡುತ್ತಿದ್ದವರ ಬೈಕ್ ಗಳನ್ನು ಕಾರುಗಳನ್ನು ಸೀಝ್ ಮಾಡಲಾಗಿದೆ.

ಅನಾವಶ್ಯಕವಾಗಿ ಪೇಟೆಗೆ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಸಮೀಪದ ಅಂಗಡಿಗಳಲ್ಲೇ ಖರೀದಿಸಬೇಕು. ತೀರಾ ಅವಶ್ಯಕತೆ ಇದ್ದರಷ್ಟೇ ಪೇಟೆಗೆ ಬರಬಹುದು ಎಂದು ಮಂಗಳವಾರ ಕುಂದಾಪುರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೂ ಪೇಟೆಯತ್ತ ಅನಾವಶ್ಯಕವಾಗಿ ಬರುವವರ ಸಂಖ್ಯೆ ಹೆಚ್ಚಾಗಿದ್ದು, ವಾಹನಗಳನ್ನು ಸೀಝ್ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.


