ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೊರೋನಾ ಹಾವಳಿಯ ನಡುವೆ ಕೆಲವೆಡೆ ಕ್ರೂರತ್ವ ಮೆರೆಯುತ್ತಿದೆ. ಇನ್ನೊಂದೆಡೆ ಮಾನವೀಯತೆ ಕಂಡು ಬರುತ್ತಿದೆ. ಹಲವಾರು ಮಂದಿ ಅನೇಕ ರೀತಿಯಲ್ಲಿ ಉತ್ತಮ ಸೇವೆಯಲ್ಲಿ ತೊಡಗಿದ್ದಾರೆ. ಅವರಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಕೂಡ ಒಬ್ಬರು. ತಮ್ಮ ಗೃಹ ಪ್ರವೇಶವನ್ನು ಸರಳ ರೀತಿಯಲ್ಲಿ ನೆರವೇರಿಸಿ, ಉಳಿದ ದುಡ್ಡಲ್ಲಿ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಅಗತ್ಯ ಔಷಧೀಯ ಕಿಟ್ ಗಳನ್ನು ಕೋವಿಡ್ ನೋಡೆಲ್ ಅಧಿಕಾರಿ ಡಾ.ನಾಗೇಶ್ ಅವರಿಗೆ ಹಸ್ತಾಂತರಿಸುವ ಮೂಲಕ ಮಾದರಿಯಾಗಿದ್ದಾರೆ.
ಕಿಟ್ ಸ್ವೀಕರಿಸಿ ಮಾತನಾಡಿದ ಸರ್ಕಾರಿ ಆಸ್ಪತ್ರೆಯ ಕೋವಿಡ್ ನೋಡೆಲ್ ಅಧಿಕಾರಿ ಡಾ. ನಾಗೇಶ್, ಪ್ರದೀಪ್ ರವರು ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರುವ ಕೋವಿಡ್ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಬೇಕಾದ ಜೀವರಕ್ಷಕ ಔಷಧಿಗಳನ್ನು ನೀಡಿದ್ದಾರೆ. ಸಾವಿರಾರು ಬೆಲೆಯ ಉತ್ತಮ ಗುಣಮಟ್ಟದ ಔಷಧಿಗಳನ್ನು ನೀಡಿದ್ದಾರೆ. ಇವರ ಈ ನಡೆ ಇತರರಿಗೆ ಸ್ಪೂರ್ತಿ ಎಂದರು.


ಈ ಸಂದರ್ಭ ಮಾತನಾಡಿದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಇತ್ತೀಚೆಗೆ ಮನೆ ಗೃಹಪ್ರವೇಶವನ್ನು ಸರಳ ರೀತಿಯಲ್ಲಿ ಮಾಡಿದೆ. ದುಂದು ವೆಚ್ಚವನ್ನು ತಪ್ಪಿಸಿ ಆಸ್ಪತ್ರೆಗೆ ನೀಡುವ ಬಗ್ಗೆ ಚಿಂತಿಸಿದ್ದು, ಆಸ್ಪತ್ರೆಗಳಲ್ಲಿ ತುರ್ತು ಔಷಧಿಯ ಕೊರತೆ ಇರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ ಆಸ್ಪತ್ರೆಗ ನಾನು ಐಸೋಲೇಷನ್ ಔಷಧಿ ಕಿಟ್ ವಿತರಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಡಾ|ವಿಜಯ ಶಂಕರ್, ಅಂಪಾರು ಗ್ರಾಮ ಪಂಚಾಯತ್ ಸದಸ್ಯ ಗಣೇಶ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

































