ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಆರೋಗ್ಯ ಇಲಾಖೆ, ಸಚಿವರ ಸಮಿತಿ ನೀಡಿರುವ ವರದಿ ಪ್ರಕಾರಪಾಸಿಟಿವಿಟಿ ರೇಟ್ ಸಂಖ್ಯೆ 10 ಕ್ಕಿಂತ ಅಥವಾ 5 ಕ್ಕಿಂತ ಕಡಿಮೆ ಬಂದಲ್ಲಿ ಲಾಕ್ ಡೌನ್ ಸಡಿಲ ಮಾಡಬಹುದು ಎಂದಿದ್ದಾರೆ. ಕೆಲವೆಡೆ ಪಾಸಿಟಿವಿಟಿ ರೇಟ್ ಜಾಸ್ತಿ. ಹಾಗಾಗಿ ಜೂ.7 ರ ಒಳಗೆ ಪಾಸಿಟಿವಿಟಿ ರೇಟ್ ಕಡಿಮೆ ಬರಬೇಕೆಂಬ ಗುರಿ ಇದೆ. ಲಾಕ್ ಡೌನ್ ಇನ್ನೊಂದು ವಾರ ಮುಂದುವರೆಸುವಂತೆ ತಜ್ಞರ ಸಮಿತಿ ತಿಳಿಸಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ನಾಡಾ ಗ್ರಾ.ಪಂ.ನಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಮನಸ್ಸಲ್ಲೂ ಲಾಕ್ ಡೌನ್ ತೆಗೆಯಬೇಕು. ಜನಜೀವನ ಸರಿ ಆಗಬೇಕೆಂಬುದಿದೆ. ಆದರೆ, ಪರ್ಸಂಟೇಜ್ ಕಡಿಮೆ ಆಗದೆ ಇದ್ದಲ್ಲಿ ಮತ್ತೆ ಹೆಚ್ಚಾಗುವ ಅಪಾಯವಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಜನ ಹಿತಕ್ಕೆ ಅನುಕೂಲವಾಗುವ ಮತ್ತು ಕೊರೋನಾ ನಿಯಂತ್ರಣಕ್ಕೆ ಬೇಕಾದ ಮಾರ್ಗಸೂಚಿಯನ್ನು ಇಂದಿನ ಸಭೆಯಲ್ಲಿ ಮಾಡುತ್ತಾರೆ.

ಕೊರೋನಾ ಮುಕ್ತವಾಗುವಲ್ಲಿ ಕಾರ್ಯಪಡೆಯ ಶ್ರಮ
ಯಾವ ಗ್ರಾ.ಪಂ.ನಲ್ಲಿ ಕಾರ್ಯಪಡೆ ಚೆನ್ನಾಗಿ ಕೆಲಸ ಮಾಡಿ, ಮನೆ ಮನೆಗೆ ಭೇಟಿ ನೀಡಿ, ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಲ್ಯಾಬ್ ಟೆಸ್ಟ್ ಮಾಡಿಸಿ, ಹೋ ಕ್ವಾರಂಟೈನ್ ಕಡ್ಡಾಯಗೊಳಿಸಿ, ಸೀಲ್ ಡೌನ್ ಮಾಡಿ, ಮನೆಗೆ ಸ್ಟಿಕ್ಕರ್ ಹಾಕಿ, ಸೋಂಕು ದೃಢಪಟ್ಟಿದ್ದರೂ ತಿರುಗುವವರ ಕೈಗೆ ಸೀಲ್ ಹಾಕಿ, ಎಲ್ಲಿ ನಿಯಂತ್ರಣವನ್ನು ಕಾರ್ಯಪಡೆ ಮಾಡಿದೆಯೋ ಅಲ್ಲಿ ಬಹಳಷ್ಟು ವೇಗವಾಗಿ ಕೊರೋನಾ ನಿಯಂತ್ರಣಕ್ಕೆ ಬಂದಿರುವುದನ್ನು ನಾವು ಗಮನಿಸಿದ್ದೇವೆ. 100-200 ಪ್ರಕರಣಗಳು ಇಂದು 25-50ಕ್ಕೆ ಬಂದಿವೆ. ಇದು ಕಾರ್ಯಪಡೆಯ, ಪಂಚಾಯತ್, ನಮ್ಮ ಅಧಿಕಾರಿಗಳ ಶ್ರಮದಿಂದ ಸಾಧ್ಯವಾಗಿದೆ. ಗ್ರಾ.ಪಂ.ನಲ್ಲಿ ಕಾರ್ಯಪಡೆಯ ಕಾರ್ಯ ಚುರುಕಾಗುವ ಯೋಜನೆಯನ್ನು ತರಲಾಗುವುದು ಎಂದರು.
ಯಾವ ಗ್ರಾ.ಪಂ. ಮೊದಲು ಕೊರೋನಾ ಮುಕ್ತ ಪಂಚಾಯತ್ ಆಗಿ ಹೊರ ಹೊಮ್ಮುತ್ತೋ ವಿಶೇಷ ಬಹುಮಾನ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದೇನೆ ಎಂದರು.

