ಬ್ರಹ್ಮಾವರ : ಪಶ್ಚಿಮ ಘಟ್ಟ ದಿಂದ ಹರಿದು ಬಂದು ಸಮುದ್ರ ಸೇರುವ ಎಲ್ಲಾ ನದಿಗಳಿಗೆ ಸಂಪರ್ಕ ವ್ಯವಸ್ಥೆಗಾಗಿ ಮಾಡಲಾಗುವ ಸೇತುವೆ ಕಾಮಗಾರಿ, ಉಪ್ಪು ನೀರು ಬರದಂತೆ ಮಾಡುವ ಕಿಂಡಿ ಅಣೆಕಟ್ಟು, ಈ ಹಿಂದೆ ಮಾಡಲಾದ ರೈಲ್ವೆ ಸೇತುವೆ ಇದೆಲ್ಲದರ ರಚನೆ ಮಾಡುವಾಗ ಹಾಕಲಾಗುವ ಸಹಸ್ರಾರು ಲೋಡ್ ಮಣ್ಣು ಕಲ್ಲುಗಳನ್ನು ತೆರವು ಮಾಡದೆ ಉಳಿದಿರುವುದರಿಂದ ಕರಾವಳಿಯಲ್ಲಿ ಈ ವರ್ಷ ಕೃತಕ ಪ್ರವಾಹದ ಭೀತಿ ಎದುರಾಗಲಿದೆ .
ಹೆಬ್ರಿ ಬಳಿಯಿಂದ ಜನ್ಮ ತಳೆದು ಹರಿದು ಬರುವ ಸೀತಾ ನದಿಯೊಂದಕ್ಕೆ ಕೊಕ್ಕರ್ಣೆ, ನೀಲಾವರ, ಹನೆಹಳ್ಳಿ ಉಪ್ಪು ನೀರು ಕಿಂಡಿ ಅಣೆಕಟ್ಟು, ರೈಲ್ವೆ ಸೇತುವೆ, ಬಾರಕೂರು ಮತ್ತು ಮಾಬುಕಳ ಸೇತುವೆ ಸೇರಿ 6 ಸೇತುವೆ ಇದೆ. ಪ್ರತಿಯೊಂದು ಸಂಪರ್ಕ ವ್ಯವಸ್ಥೆ ಮಾಡುವಾಗ ಸಂಚಾರಕ್ಕೆ ಮತ್ತು ನೀರು ನುಗ್ಗದಂತೆ ತಡೆಯಾಗಿ ನದಿಗೆ ಮಣ್ಣು ತುಂಬಿಸಲಾಗಿ ಕಾಮಗಾರಿ ಬಳಿಕ ತುಂಬಿಸಿದ ಮಣ್ಣನ್ನು ತೆರವು ಮಾಡುವ ಕುರಿತು ಯಾವೂದೇ ಗುತ್ತಿಗೆ ಪಡೆದವರು ಮಾಡದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.

ಬ್ರಹ್ಮಾವರ ಬಳಿಯ ಹೇರೂರು ಮಡಿಸಾಲು ಹೊಳೆಗೆ ಕಿಂಡಿ ಅಣೆಕಟ್ಟು ಕಾಮಗಾರಿಯಾಗುತ್ತಿದ್ದು, ಮೇ ಅಂತ್ಯದೊಳಗೆ ಕಾಮಗಾರಿ ಮುಗಿಯ ಬೇಕಿತ್ತು. ಆದರೆ, ಈ ವರ್ಷ ಬೇಗ ಮಳೆ ಬಂದ ಕಾರಣ ಅರ್ಧಕ್ಕೆ ನಿಲ್ಲುವಂತೆ ಆಗಿದೆ. ಕಾಮಗಾರಿಗಾಗಿ ಲೋಡು ಗಟ್ಟಲೆ ಮಣ್ಣು ತುಂಬಿಸಿದ್ದು ಈ ವರ್ಷದ ಪ್ರವಾಹಕ್ಕೆ ನದಿಯಲ್ಲಿ ತುಂಬಿಸಲಾದ ಮಣ್ಣು ಯಾವುದೋ ದಿಕ್ಕಿಗೆ ಚಲಿಸಿ ಉಪ್ಪೂರು ಪಶ್ಚಿಮ ಭಾಗದ ನದಿ ತೀರದಲ್ಲಿ ಕೃತಕ ಪ್ರವಾಹದಿಂದ ನೀರು ನುಗ್ಗುವ ಭೀತಿ ಎದುರಾಗಲಿದೆ .
ಬಾರಕೂರು ಸೇತುವೆ ಕುಸಿತಗೊಂಡು 10 ವರ್ಷದ ಹಿಂದೆ ಹೊಸ ಸೇತುವೆ ಮಾಡುವಾಗ ತಡೆಗಾಗಿ ಬಳಸಿದ ಮಣ್ಣು ರಸ್ತೆಯ ಪೈಪು , ಸಿಮೆಂಟ್ ಮಿಶ್ರಿತ ಬಂಡೆಗಳ ಪಳಯುಳಿಕೆ ಇಂದಿಗೂ ಕಂಡು ಬಂದು ಇಲ್ಲಿನ ಕಚ್ಚೂರು, ನಲ್ಕುದ್ರು , ಹಾಲೇಕೊಡಿ, ಹಂದಾಡಿ ಭಾಗದಲ್ಲಿ ನದಿಯ ನೀರಿನ ಹರಿವಿನ ದಿಕ್ಕು ಬದಲಿಸಿದೆ . ಅದೇ ರೀತಿಯಲ್ಲಿ ನಾನಾ ಭಾಗದಿಂದ ಮಳೆಗಾಲದಲ್ಲಿ ಹರಿದು ಬಂದು ನದಿ ಸೇರುವ ಮರಳನ್ನು ಮರಳುಗಾರಿಕೆಯಿಂದ ತೆರವುಗೊಳ್ಳುತ್ತಿದ್ದು ಕಳೆದ 2 ವರ್ಷದಿಂದ ಮರಳು ಶೇಖರಣೆ ಗೊಂಡು ನದಿಯಲ್ಲಿ ಮರಳಿನ ದಿಬ್ಬ ಉಂಟಾಗಿ ನೀರಿನ ಹರವಿಗೆ ತೊಡಕಾಗಲಿದೆ.
ಕರಾವಳಿಯ ಒಟ್ಟು 24 ನದಿಗಳಲ್ಲಿ ಹೊಸದಾಗಿ ರಚನೆಯಾಗುವ ಸೇತುವೆ, ಕಿಂಡಿ ಅಣೆಕಟ್ಟುಗಳಿಗಾಗಿ ಮಾಡುವಾಗ ಬದಲಿ ರಸ್ತೆ ಮತ್ತು ದಂಡೆಯನ್ನು ಕಾಮಗಾರಿ ಮುಗಿದ ಬಳಿಕ ತೆರವು ಆಗದಿದ್ದಲ್ಲಿ ಈ ವರ್ಷ ಬಾರೀ ವಿಕೋಪ ಉಂಟಾಗಲಿದೆ ಎನ್ನುವುದು ನದಿ ತೀರದ ಜನರ ಅತಂಕವಾಗಿದೆ .



































