ಕಾಪು: ಮೀನುಗಾರಿಕೆ ಸಂಬಂಧಿತ ಸಮಸ್ಯೆ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಕರಾವಳಿಯ ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಲಾಗುವುದು ಎಂದು ಮೀನುಗಾರಿಕೆ, ಬಂದರು- ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಅವರು ಬುಧವಾರ ಕಾಪು ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಅಹವಾಲು ಸ್ವೀಕರಿಸಿ ಬಳಿಕ ‘ತೌಕ್ತೆ’ ಚಂಡಮಾರುತದಿಂದಾಗಿ ಹಾನಿಗೊಳಗಾದ ಮಟ್ಟು, ಕೈಪುಂಜಾಲು, ಕಾಪು ಲೈಟ್ ಹೌಸ್ ಪ್ರದೇಶ, ಮೂಳೂರು, ಪಡುಬಿದ್ರಿ ಪರಿಸರ ವೀಕ್ಷಿಸಿ ಮಾತನಾಡಿದರು.
ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಿಎಂ, 500 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ಅದರಲ್ಲಿ ಮೀನುಗಾರ ಫಲಾನುಭವಿಗೆ ಪರಿಹಾರ ಹಂಚುವಿಕೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಹೆಜಮಾಡಿ ಬಂದರು ನಿರ್ಮಾಣದ ಅಡೆತಡೆ ನಿವಾರಿಸಿ ಕೂಡಲೇ ಕಾಮಗಾರಿಯ ಟೆಂಡರ್ ಕುರಿತು ಇರುವ ತಡೆಯಾಜ್ಞೆ ತೆರವುಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.


ಕಾಪುವಿನಲ್ಲಿ ಮೀನುಗಾರಿಕಾ ಜಟ್ಟಿ
ಕಾಪುವಿನಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ ಮೀನುಗಾರರ ಮನವಿ ಸ್ವೀಕರಿಸಿದ ಅವರು, ಕರಾವಳಿಯಲ್ಲಿ ಜಟ್ಟಿ ಮತ್ತು ಜಟ್ಟಿ ವಿಸ್ತರಣೆ ಬಗ್ಗೆ ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲೆಲ್ಲಿ ಜಟ್ಟಿ ನಿರ್ಮಾದ ಬಗ್ಗೆ ಪ್ರಸ್ತಾವನೆ ಮತ್ತು ಅವಶ್ಯಕತೆ ಇದೆಯೋ, ಅಲ್ಲಿ ಆದ್ಯತೆ ಮೇರೆಗೆ ಜಟ್ಟಿ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಸಮುದ್ರದಲ್ಲಿ ಆಗುವ ದುರಂತಗಳನ್ನು ಎದುರಿಸುವ ಮತ್ತು ಅದರಿಂದಾಗುವ ಅಪಾಯಗಳನ್ನು ತಪ್ಪಿಸಲು ತುರ್ತು ಕಾರ್ಯಪಡೆ ರಚನೆ ಬಗ್ಗೆ 15 ದಿನಗಳೊಳಗೆ ಕರಾವಳಿ ಮೂರು ಜಿಲ್ಲೆಗಳ ಇಲಾಖೆ ಅಧಿಕಾರಿಗಳು ಹಾಗು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕರಾವಳಿ ತೀರದಲ್ಲಿ ಡ್ರೆಜ್ಜಿಂಗ್ ಸಮಸ್ಯೆಗಳಿದ್ದು, ಈವರೆಗೆ ಸರಕಾರವೇ ಡ್ರೆಜ್ಜಿಂಗ್ ಮಾಡುತ್ತಿತ್ತು. ಸರಕಾರದಿಂದ ಡ್ರೆಜ್ಜಿಂಗ್ ಮಾಡಲು ಅಸಾಧ್ಯವಾದಲ್ಲಿ ಮೀನುಗಾರಿಕಾ ಪೆಡರೇಷನ್ ಮೂಲಕ ಡ್ರೆಜ್ಜಿಂಗ್ ಆಗಬೇಕಿದ್ದಲ್ಲಿ ಅವಕಾಶ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ,ಬಿಜೆಪಿ ರಾಷ್ಟ್ರೀಯ ಮೀನುಗಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ,ಮುಖಂಡರಾದ ಪ್ರಕಾಶ್ ಶೆಟ್ಟಿ
ಪಾದೆಬೆಟ್ಟು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್,ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ರಾವ್,ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್,
ಅನಿಲ್ ಶೆಟ್ಟಿ ಮಾಮ್ಬಾಡಿ, ದ.ಕ ಜಲ್ಲಾ ಮೀನುಗಾರಿಕೆ ಇಲಾಖೆ ಹಿರಿಯ ಉಪ ನಿರ್ದೇಶಕ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಹಿರಿಯ ಉಪ ನಿರ್ದೇಶಕ ಗಣೇಶ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶನ ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕ ದಿವಾಕರ ಕಾರ್ವಿ, ಕಾಪು ತಹಶಿಲ್ದಾರ್ ಪ್ರತಿಭಾ ಆರ್,ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮೊದಲಾದವರು ಉಪಸ್ಥಿತರಿದ್ದರು.



































