ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಕೀ ಚೈನ್ ಮಾರಾಟ ಮಾಡುತ್ತಿದ್ದ ೪ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಕೊಪ್ಪಳ ಮತ್ತು ಶಿರಸಿ ಮೂಲದ ಆದಿ ಉಡುಪಿಯಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರ ಮಕ್ಕಳು ಉಡುಪಿಯ ಬಿಗ್ ಬಜಾರ್ ಮತ್ತು ಕೋರ್ಟ್ ರಸ್ತೆಗಳಲ್ಲಿ ಕೀ ಚೈನ್ ಮಾರಾಟ ಮಾಡುತ್ತಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ನಾಗರತ್ನ ರವರು ಮಾಹಿತಿ ನೀಡಿದ್ದು ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಧಿಕಾರಿಗಳು ಮಕ್ಕಳನ್ನು ರಕ್ಷಿಸಿದ್ದಾರೆ.

ಶಾಲೆ ಇಲ್ಲದೆ ಇರುವುದರಿಂದ ಕೀ ಚೈನ್ ಮಾರಾಟ ಮಾಡುತ್ತಿದ್ದು, ೪ ಗಂಡು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಸಿ ಯಸ್ ಐ ಬಾಯ್ಸ್ ಹೋಮ್ ಉಡುಪಿಯಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ , ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ , ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಆಪ್ತ ಸಮಾಲೋಚಕಿ ಅಂಬಿಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



































