ಪಡುಬಿದ್ರಿ: ಸ್ಥಳೀಯವಾಗಿ ಸ್ಥಾಪನೆಗೊಳ್ಳುವ ಬೃಹತ್ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ.ಉದ್ದಿಮೆಗೆ ಪರವಾನಿಗೆ ನೀಡುವ ವೇಳೆ ಮಾಡುವ ಒಪ್ಪಂದದಲ್ಲೇ ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತು ಸೂಚನೆ ನೀಡಲಾಗುತ್ತಿದೆ. ಅದಕ್ಕೆ ವಿರುದ್ಧವಾಗಿ ಯಾವ ಕೈಗಾರಿಕೆಗಳು ನಡೆದುಕೊಳ್ಳುತ್ತವೆಯೋ ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸೋಮವಾರ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಈ ಸಂದರ್ಭ ಎಲ್ಲೂರು ಗ್ರಾಪಂ ಅಧ್ಯಕ್ಷ ಜಯಂತ ಕುಮಾರ್ ಮಾತನಾಡಿ, ಪಡುಬಿದ್ರಿ ಗ್ರಾ.ಪಂಗೆ ಎಸ್ಎಲ್ಆರ್ ಆರ್ ಎಂ ಘಟಕ ಮತ್ತು ವಸತಿ ಯೋಜನೆಗಳಿಗೆ ಸುಜ್ಲಾನ್ ಯೋಜನೆಯಲ್ಲಿ ಹೆಚ್ಚುವರಿಯಾಗಿರುವ ಜಮೀನನ್ನು ಒದಗಿಸಿ ಕೊಡುವಂತೆ ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷ ರವಿಶೆಟ್ಟಿ
ಮನವಿ ಸಲ್ಲಿಸಿದರು.ಯುಪಿಸಿಎಲ್ ಯೋಜನೆಯಿಂದ ಪರಿಸರಕ್ಕೆ ಮಾಲಿನ್ಯವಾಗುತ್ತಿದೆ ಎಂದು ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಉಪ ಕೇಂದ್ರ ಮತ್ತು ಹೆಚ್ಚುವರಿ ನೀರಾವರಿ ಸೌಲಭ್ಯವನ್ನು ಒದಗಿಸುವಂತೆ ಕೈಗಾರಿಕಾ ಉದ್ಯಮಿಗಳು ಬೇಡಿಕೆ ಸಲ್ಲಿಸಿದರು. ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ 21 ಕೈಗಾರಿಕೆಗಳು ಹಾಗೂ ಸುಜ್ಲಾನ್ ಯೋಜನೆಯಿಂದ ತೆರಿಗೆ ಪಾವತಿಯಾಗದಿರುವ ಬಗ್ಗೆ ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಡಿ ಪ್ರಭು ಮತ್ತು ಸದಸ್ಯ ರಾಯೇಶ್ವರ ಪೈ ಸಚಿವರ ಗಮನ ಸೆಳೆದರು.
ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸುಜ್ಲಾನ್ ಹಾಗೂ ಯುಪಿಸಿಎಲ್ ಯೋಜನೆಗಳಿಂದ ಆಗಿರುವ ಸಮಸ್ಯೆಗಳ ಬಗ್ಗೆ ಹಾಗೂ ಕೈಗಾರಿಕೆಗಳ ತೆರಿಗೆ ಪಾವತಿ ಕುರಿತಂತೆ ಶೀಘ್ರ ಸಮಗ್ರ ವರದಿ ಸಲ್ಲಿಸುವಂತೆ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. ಇಲಾಖೆಯ ವರದಿ ಆಧರಿಸಿ ಅವರಿಗೆ ಎಚ್ಚರಿಕೆ ನೀಡುವ ಇಲ್ಲವೇ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಿದ್ದೇವೆ ಎಂದರು. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್ ಹಾಗು ಪ್ರಮುಖರು ಉಪಸ್ಥಿತರಿದ್ದರು.


































