ಶಿರ್ವ : ಪಂಚಾಯತ್ ರಾಜ್ ವ್ಯವಸ್ಥೆಯಡಿ ರಾಜ್ಯದಲ್ಲೆ ಪ್ರಥಮ ಎಂಬಂತೆ ಗ್ರಾಮ ಸಭೆಯ ನೇರ ಪ್ರಸಾರ – ದೇಶ ವಿದೇಶದಲ್ಲಿರುವ ಶಿರ್ವ ಗ್ರಾಮಸ್ಥರಿಗೆ ಗ್ರಾಮ ಸಭೆಯನ್ನು ವೀಕ್ಷಿಸುವ ಅವಕಾಶ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯ, ಕಾಪು ತಾಲೂಕಿನ, ಶಿರ್ವ ಗ್ರಾಮ ಪಂಚಾಯತ್ ನ 2021-22 ಸಾಲಿನ ಪ್ರಥಮ ಗ್ರಾಮ ಸಭೆಯು ದಿನಾಂಕ ಜುಲೈ 19ರ ಸೋಮವಾರದಂದು ಬೆಳಿಗ್ಗೆ 10.30 ಕ್ಕೆ ಶಿರ್ವ ಸಾರ್ವಜನಿಕ ಗಣೆಶೋತ್ಸವ ವೇದಿಕೆಯ ಸಮೀಪದ ಮಹಿಳಾ ಸೌಧದಲ್ಲಿ ನಡೆಯಲಿದೆ.
ಈ ಗ್ರಾಮ ಸಭೆಯಲ್ಲಿ ಭಾಗವಹಿಸಲು ಎಲ್ಲ ಗ್ರಾಮಸ್ಥರಿಗೆ ಆಮಂತ್ರಣವಿದ್ದು, ಈ ಸಂಪೂರ್ಣ ಸಭೆಯನ್ನು ತಮ್ಮ ಮನೆಗಳಿಂದಲೂ ವೀಕ್ಷಿಸುವ ಅವಕಾಶವನ್ನು ಶಿರ್ವ ಪಂಚಾಯತ್ ವತಿಯಿಂದ ಏರ್ಪಡಿಸಲಾಗಿದೆ. ಈ ಬಗ್ಗೆ ಶಿರ್ವ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪಾಟ್ಕರ್ ಮಾತನಾಡಿ, “ನಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲ ಗ್ರಾಮಸ್ಥರ ಸಲಹೆ ಸೂಚನೆಗಳು ಮಹತ್ವದ್ದು. ನಾವು ಮಾಡಿದ ವಿವಿಧ ಯೋಜನೆಗಳ ಮಾಹಿತಿ, ನಮ್ಮ ಗ್ರಾಮಸ್ಥರಿಗೆ ನೀಡುವುದು ನಮ್ಮ ಕರ್ತವ್ಯ. ಕೊರೊನಾ ಮಹಾಮಾರಿಯ ಭಯ ಹಾಗೂ ನಿರಂತರ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಬಹಳಷ್ಟು ಜನರು ಈ ಗ್ರಾಮ ಸಭೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಹಿಂಜರಗುವುದು ಸಹಜ, ಆದ್ದರಿಂದ ಅವರಿಗೆ ತಮ್ಮ ಮನೆಯಲ್ಲೇ ಕೂತು ಗ್ರಾಮ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡುವುದೇ ಈ ನೇರಪ್ರಸಾರದ ಉದ್ದೇಶ. ಈ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಇಲಾಖಾ ಮಾಹಿತಿಯನ್ನು ನೀಡಲಿದ್ದಾರೆ, ಇದು ನಮ್ಮ ಗ್ರಾಮಸ್ಥರಿಗೆ ತಿಳಿಯುವುದು ಬಹುಮುಖ್ಯ” ಎಂದರು.
ಅಭಿವೃದ್ದಿ ಅಧಿಕಾರಿ, ಅನಂತ ಪದ್ಮನಾಭ ನಾಯಕ್ ಈ ಬಗ್ಗೆ ಮಾಹಿತಿ ನೀಡಿ, “ಗ್ರಾಮಸಭೆಗೆ ವಯಕ್ತಿಕವಾಗಿ ಹಾಜರಾಗಲು ಇಚ್ಛಿಸುವ ಗ್ರಾಮಸ್ಥರಿಗೂ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಯಕ್ತಿಕವಾಗಿ ಭಾಗವಹಿಸುವ ಎಲ್ಲಾ ಗ್ರಾಮಸ್ಥರಿಗೆ ಉಚಿತ ಮಾಸ್ಕ್ ವಿತರಣೆ ನಡೆಯಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಮೂಲಕ ವಿನಂತಿ ಮಾಡಲಾಗಿದೆ” ಎಂದು ತಿಳಿಸಿದರು.
ಶಿರ್ವ ಪಂಚಾಯತಿಯ ಗ್ರಾಮ ಸಭೆಯನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು



































