ಎಲ್ಲಾ ಸರ್ಕಾರಿ ಸೇವೆಗಳಲ್ಲಿ ‘ತೃತೀಯ ಲಿಂಗಿ’ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ಈ ಕುರಿತಂತೆ ಸರ್ಕಾರವು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ, 1977ಕ್ಕೆ ತಿದ್ದುಪಡಿ ಮಾಡಿದ ನಂತರ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದೆ.
ಜುಲೈ 6 ರಂದು ಹೊರಡಿಸಲಾದ ಅಂತಿಮ ಅಧಿಸೂಚನೆಯಲ್ಲಿ ಎಲ್ಲಾ ಸಾಮಾನ್ಯ ಮತ್ತು ಮೂರನೇ ಲಿಂಗದ ಮೀಸಲಾತಿ ವರ್ಗಗಳಲ್ಲಿ ಶೇಕಡಾ ಒಂದು ಮೀಸಲಾತಿಯನ್ನು ನಿರ್ದಿಷ್ಟ ಪಡಿಸುತ್ತದೆ.
ಸರಕಾರಿ ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಮಂಗಳಮುಖಿಯರಿಗೆ ಯಾವುದೇ ಭೇದ ಭಾವ ಮಾಡಬಾರದೆಂದು ಎಂದು ಅಧಿಸೂಚನೆ ಒತ್ತಿ ಹೇಳಿದ್ದು, ತೃತೀಯ ಲಿಂಗಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಅದೇ ವರ್ಗದಿಂದ ಪುರುಷ ಅಥವಾ ಮಹಿಳೆಯರಿಗೆ ಸೇವೆಗಳಲ್ಲಿ ಅವಕಾಶ ನೀಡಬಹುದು ಎಂದು ಅಧಿಸೂಚನೆ ತಿಳಿಸುತ್ತದೆ.

ರಾಜ್ಯ ವಿಶೇಷ ಮೀಸಲು ಕಾನ್ ಸ್ಟೇಬಲ್ ಪಡೆ ಮತ್ತು ಬ್ಯಾಂಡ್ಸ್ ಮನ್ ಪೋಸ್ಟಿಂಗ್ʼಗಳಲ್ಲಿ ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶಗಳ ನಿರಾಕರಣೆ ಯಾನ್ನು ಪ್ರಶ್ನಿಸಿ ಎನ್ ಜಿಒ ‘ಸಂಗಮ’ ಹೈಕೋರ್ಟ್ʼನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿತು.

































