ಮಂಗಳೂರು: ಇಸ್ರೇಲ್ ಮೇಲೆ ದಾಳಿ ನಡೆಸಿದ ಉಗ್ರ ಸಂಘಟನೆ ಹಮಾಸ್ ಪರ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದ ತೋಕೂರು, ಜೋಕಟ್ಟೆಯ ಝಾಕಿರ್ (58 )ಎಂಬ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಝಾಕಿರ್ ಹರಿಬಿಟ್ಟ ವಿಡಿಯೋ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಉಪನಿರೀಕ್ಷರಾದ ವಿನಾಯಕ್ ತೊರಗಲ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಈಗಾಗಲೇ ಝಾಕಿರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ವಿಚಿತ್ರ ಗೆಟಪ್‌ನಲ್ಲೇ ಕಂಡುಬಂದ ಝಾಕಿರ್ ಮೇಲೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೋದಲ್ಲಿ ಏನಿದೆ?
ಝಾಕೀರ್ ವಿಡಿಯೋದಲ್ಲಿ, ‘ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲಿ’ ಎಂದು ಹೇಳಿದ್ದಾನೆ. ಮಸೀದಿಯ ಶುಕ್ರವಾರದ ನಮಾಜ್ ನಲ್ಲಿ ಪ್ರಾರ್ಥಿಸಿ ಅಂದಿರೋ ಝಾಕೀರ್, ತಾನು ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯ ಅಂತ ಹೇಳಿಕೊಂಡಿದ್ದಾನೆ.
ಪ್ಯಾಲೆಸ್ತೀನ್, ಗಾಜಾ ಹಾಗೂ ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲು ಪ್ರಾರ್ಥಿಸಿ ಎಂದು ಮನವಿ ಮಾಡಿರೋ ಆತ, ಶುಕ್ರವಾರದ ನಮಾಜ್ ನಲ್ಲಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಅಂತ ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯರಿಗೆ ಕರೆ ಕೊಟ್ಟಿದ್ದಾನೆ.
ಪೌರತ್ವ ಕಾಯ್ದೆ ಗಲಭೆಯಲ್ಲೂ ವೀಡಿಯೋ :

2019ರಲ್ಲೂ ಇದೇ ರೀತಿ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಪೌರತ್ವ ಕಾಯ್ದೆ ವಿರುದ್ದ ಭಾರೀ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದ ಝಾಕೀರ್ ನ ಆ ವಿಡಿಯೋ, ಅಂದು ಮಂಗಳೂರು ಗಲಭೆಗೂ ಮುನ್ನ ವೈರಲ್ ಆಗಿತ್ತು. ಗಲಭೆ ಪೀಡಿತ ಬಂದರು ಪ್ರದೇಶದ ಮಸೀದಿ ಬಳಿಯೇ ನಿಂತು ಕರೆಕೊಟ್ಟಿದ್ದ ಝಾಕೀರ್, 2019ರ ಡಿ.20ರ ಶುಕ್ರವಾರ ನೆಹರೂ ಮೈದಾನಕ್ಕೆ ಬರುವಂತೆ ಕರೆ ಕೊಟ್ಟಿದ್ದ. ಆ ಬಳಿಕ ಸಿಎಎ ಪ್ರತಿಭಟನೆ ಮಂಗಳೂರಿನಲ್ಲಿ ಭಾರೀ ಗಲಭೆ ಸೃಷ್ಟಿಸಿತ್ತು.
